ಕೊಲ್ಹಟ್‍ಕರ್ ಅಚ್ಯುತ ಬಳವಂತ		
1879-1931. ಮರಾಠಿ ಪತ್ರಿಕೋದ್ಯಮಿ ಮತ್ತು ನಾಟಕಕಾರ. 1879ರ ಆಗಸ್ಟ್ 1ರಂದು ವಾಯಿಯಲ್ಲಿ ಈತನ ಜನನ. ತಂದೆಯ ಹೆಸರು ವಾಮನರಾವ್ ಎಂದಿದ್ದರೂ ಕೊಲ್ಹಟ್‍ಕರ್ ಬಾಲ್ಯದಲ್ಲಿ ದೊಡ್ಡಪ್ಪನ ಪೋಷಣೆಯಲ್ಲಿದ್ದದ್ದರಿಂದ ಶಾಲೆಯಲ್ಲಿ ದೊಡ್ಡಪ್ಪನ ಹೆಸರೇ (ಬಳವಂತ) ತಂದೆಯ ಹೆಸರೆಂದು ದಾಖಲಾಯಿತು. ಹಾಗೆಂದೇ ಮುಂದೆಯೂ ಬಳಕೆಗೆ ಬಂತು. ಚಿಕ್ಕಂದಿನಿಂದಲೂ ವ್ಯಾಸಂಗದಲ್ಲಿ ಆಸಕ್ತಿ ತಳೆದಿದ್ದ ಕೊಲ್ಹಟ್‍ಕರ್ ಬಿ.ಎ., ಎಲ್.ಎಲ್.ಬಿ. ಪದವೀಧರ(1904). ಸಾತಾರಾದಲ್ಲಿ ಎರಡು ವರ್ಷ ಉಪಾಧ್ಯಾಯನಾಗಿದ್ದ ಮೇಲೆ ಮನೆಯವರ ಆಗ್ರಹದ ಮೇರೆಗೆ ನಾಗಪುರದಲ್ಲಿ ವಕೀಲಿ ಪ್ರಾರಂಭಿಸಿದ. ಆದರೆ ಆ ವೃತ್ತಿಯಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ. ಟಿಳಕರ ರಾಜಕಾರಣದಲ್ಲಿ ಶ್ರದ್ಧೆ ಬೆಳೆದಿತ್ತು. ನಾಗಪುರದ ದೇಶಸೇವಕ ಪತ್ರಿಕೆಯ ಲೇಖಕನಾಗಿ ಮುಂದೆ ಅದರ ಸಂಪಾದಕನೂ ಆದ. ರಾಜಕೀಯದಲ್ಲಿ ತಂದೆ ವಾಮನರಾವ್ ಮವಾಳ ಪಕ್ಷವಾದರೆ ಮಗ ಅಚ್ಚುತರಾವ್ ಜಹಾಲ ಪಕ್ಷ. ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡದ್ದಕ್ಕಾಗಿ 1908ರ ಮಧ್ಯದಲ್ಲಿ ಸರ್ಕಾರ ಈತನಿಗೆ ಒಂದೂ ಮುಕ್ಕಾಲು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಕಾರಾಗೃಹದಿಂದ ಹೊರಬಂದ ಮೇಲೆ (1912) ಕೆಲವು ವರ್ಷ ಈತ ಮದ್ರಾಸಿನಲ್ಲಿ ನೆಲಸಿದ್ದು, ಅನಂತರ ಮುಂಬಯಿಗೆ ಬಂದು ಸಂದೇಶ್ ಎನ್ನುವ ದಿನಪತ್ರಿಕೆ ಪ್ರಾರಂಭಿಸಿದ. ಇದು ಬಹುಬೇಗ ಜನಪ್ರಿಯವಾಯಿತು. ಜನರ ಮನಸ್ಸನ್ನು ನಾಟುವ, ಅವರನ್ನು ಉತ್ತೇಜಿಸುವ, ಗುಣಗಳಿಂದ ಕೂಡಿದ ಲೇಖನಗಳನ್ನು ಬರೆಯುವುದರಲ್ಲಿ ಕೊಲ್ಹಟ್‍ಕರ್ ಕೈ ಪಳಗಿತ್ತು. ಪ್ರಚಲಿತ ವಿಷಯಗಳ ಜೊತೆಗೆ ರಂಜನೆಯ ಅನೇಕ ವಿಷಯಗಳೂ ಈತನ ದಿನಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದುವು. ಈ ಪತ್ರಿಕೆ ಸರ್ಕಾರದ ಆಗ್ರಹಕ್ಕೆ ಪದೇಪದೇ ಈಡಾಗುತ್ತಿತ್ತು. ಐದು ಸಲ ಅದನ್ನು ನಿಲ್ಲಿಸಲಾಗಿತ್ತು. ಸಂದೇಶದ ಜೊತೆಗೆ ಮೆಸೇಜ್ ಎನ್ನುವ ಇಂಗ್ಲಿಷ್ ದಿನಪತ್ರಿಕೆಯನ್ನೂ ಈತ ಹೊರಡಿಸಿದ. ಈತ ಪ್ರಕಟಿಸಿದ ಇನ್ನೊಂದು ಪತ್ರಿಕೆ ಶ್ರುತಿಬೋಧ. ಇದು ಇಂಗ್ಲಿಷ್, ಗುಜರಾತಿ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಪ್ರಕಟವಾಗುತ್ತಿದ್ದ ಒಂದು ಮಾಸಪತ್ರಿಕೆ. ದೇಶಸೇವಕ (ವಾರ ಪತ್ರಿಕೆ), ಉಷಾ (ಮಾಸಪತ್ರಿಕೆ), ಯುಗಾಂತರ (ವಾರಪತ್ರಿಕೆ), ಚಾಬೂಕ್‍ಸ್ವಾರ (ವಾರಪತ್ರಿಕೆ) ಇತ್ಯಾದಿ ಅನೇಕ ನಿಯತಕಾಲಿಕೆಗಳನ್ನು ಆತ ನಡೆಸುತ್ತಿದ್ದ. ಒಂದು ಪತ್ರಿಕೆ ನಿಂತರೆ ಇನ್ನೊಂದು ಪತ್ರಿಕೆಯನ್ನು ಹೊರಡಿಸುವ ಮಟ್ಟಿಗೆ ಆತನಿಗೆ ಉತ್ಸಾಹವಿತ್ತು. ಲೇಖಕನಾಗಿ ಕೊಲ್ಹಟ್‍ಕರನ ಕಲ್ಪನಾಸಾಮಥ್ರ್ಯ ಅಸಾಧಾರಣವಾದ್ದು. ಶಿಶುಸಾಹಿತ್ಯದಲ್ಲೂ ಈತ ಪರಿಣತನೆನಿಸಿದ್ದ. ಪತ್ರಿಕೆಗಳಿಗೆ ಬರೆಯುವುದು ಈತನಿಗೊಂದು ಚಟವಾಗಿ ಪರಿಣಮಿಸಿತ್ತು.

ಮುಂದೆ ಕೇಸರಿ ಪತ್ರಿಕೆಗೂ ಕೊಲ್ಹಟ್‍ಕರನಿಗೂ ಮತಭೇದ ಉಂಟಾಯಿತು, ಟಿಳಕರೊಂದಿಗೂ ಈತನ ವಿರಸ ಬೆಳೆಯಿತು. ಕೊಲ್ಹಟ್‍ಕರನಿಗೆ ಗಾಂಧೀವಾದದಲ್ಲಿ ಕ್ರಮೇಣ ಹೆಚ್ಚುಹೆಚ್ಚಾಗಿ ಶ್ರದ್ಧೆ ಮೂಡಿತು. ತಾತ್ಯಾಸಾಹೇಬ್ ಕೇಳಕರನಿಂದಲೂ ಬೇರೆಯಾದ. 1930ರ ಕಾನೂನುಭಂಗ ಚಳವಳಿಯಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸಿದ. ಅನಂತರ ಕೊಲ್ಹಟ್‍ಕರ್ ಹೆಚ್ಚು ಕಾಲ ಬದುಕಲಿಲ್ಲ; 1931ರ ಜೂನ್ 15ರಂದು ನಿಧನ ಹೊಂದಿದ.

ಕೊಲ್ಹಟ್‍ಕರ್ ಉತ್ತಮ ವಾಗ್ಮಿಯೂ ನಟನೂ ಆಗಿದ್ದ. ನಾರಿಂಗೀ ನಿಶಾಣ ಮಂಡಳಿ ಎಂಬ ಹೆಸರಿನ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿ, ಅದರಲ್ಲಿ ಪತ್ನಿಯೊಂದಿಗೆ ಅಭಿನಯಿಸುತ್ತಿದ್ದ. ನಾರಿಂಗೀ ನಿಶಾಣ, ತಾಯೀ ತೇಲೀಣ, ಬಟ್ಪ್ಯಾಬೋಳ ಮುಂತಾದ ಹನ್ನೊಂದು ನಾಟಕಗಳನ್ನೂ ಐದು ಕಾದಂಬರಿಗಳನ್ನೂ ಬರೆದಿದ್ದಾನೆ. 			 (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ